ಪಿಕ್ಕಿಹಾಳ್
ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಒಂದು ಸಣ್ಣ ಹಳ್ಳಿ. ಈ ಜಿಲ್ಲೆಯಲ್ಲಿ ಶೋಧಿಸಿದ ಹಲವಾರು ಪ್ರಾಗೈತಿಹಾಸಿಕ ಮತ್ತು ಇತಿಹಾಸ ಪ್ರಾರಂಭ ಕಾಲದ ಪ್ರಾಕ್ತನ ಸಾಂಸ್ಕøತಿಕ ನಿವೇಶನಗಳ ಪೈಕಿ ಮಹತ್ವವಾದುವುಗಳಲ್ಲಿ ಒಂದು ಈ ಹಳ್ಳಿಯಲ್ಲಿದೆ. ಇದನ್ನು 1951 ರಲ್ಲಿ ಕೇಂಬ್ರಿಜ್ಜಿನ ಆಲ್ಜಿನ್ ದಂಪತಿಗಳು ಬೆಳಕಿಗೆ ತಂದರು. ಅವರು ಈ ನೆಲೆಯನ್ನು 1952 ರಲ್ಲಿ ಉತ್ಖನನ ಮಾಡಿ, ಅದರಿಂದ ಶೋಧವಾದ ವಸ್ತುಗಳ, ಅವುಗಳಿಂದ ತಿಳಿದುಬಂದ ಮಾನವನ ದೈನಂದಿನ ಜೀವನದ ಸಾಂಸ್ಕøತಿಕ ಅವಶೇಷಗಳ ಮತ್ತು ಆ ಜೀವನದ ಬೆಳವಣಿಗೆಯ ವಿವರಣೆಯನ್ನು ಪಿಕ್ಕಿಹಾಳ್ ಎಕ್ಸ್‍ಕವೇಷನ್ಸ್ (1960) ಎಂಬ ತಮ್ಮ ಪುಸ್ತಕದಲ್ಲಿ ನೀಡಿದ್ದಾರೆ.

ಈ ಪ್ರಾಚೀನ ನೆಲೆಯ ಹಳ್ಳಿಯ ವಾಯವ್ಯ ದಿಕ್ಕಿಗೆ ಸುಮಾರು ಕಿ.ಮೀ. ದೂರದಲ್ಲಿ ಪೂರ್ವ-ಪಶ್ಚಿಮಾಭಿಮುಖವಾಗಿ ಕಲ್ಲುಗುಡ್ಡಗಳಿವೆ. ಇಲ್ಲಿ ಬೃಹತ್ ಶಿಲಾ ಸಂಸ್ಕøತಿಯ ದುಂಡುಕಟ್ಟೆಗಳ ಗುಂಪುಗಳು ನಾಲ್ಕು ಎಡೆಗಳಲ್ಲಿವೆ. ಪಶ್ಚಿಮ ಭಾಗದಲ್ಲಿ ನಿಲುಗಲ್ಲುಗಳ ಸಾಲುಗಳಿವೆ. ಗುಡ್ಡದ ಅಂಚಿನಲ್ಲೂ ಸಾಲುಗಳೊಳಗಿನ ಬಯಲು ಪ್ರದೇಶದಲ್ಲೂ ಪ್ರಾಚೀನ ವಾಸ್ತವ್ಯದ ನೆಲೆ ವಿಸ್ತಾರವಾಗಿದೆ. ನೆಲೆಯ ಒಂದೆಡೆಯಲ್ಲಿ ಬಹಳಷ್ಟು ಕಿತ್ತೊಗೆದ ಒಂದು ಬೂದಿಕಿಟ್ಟದ ದಿಣ್ಣೆಯಿದೆ. ಗುಡ್ಡಗಳ ದೊಡ್ಡ ದೊಡ್ಡ ಬಂಡೆಗಳ ಮೇಲೆ ಅಲ್ಲಲ್ಲಿ ಮನಸ್ಸಿಗೆ ಹಿಡಿಯುವ, ಕುಟ್ಟಿ ತೆಗೆದ ದನ, ಎತ್ತು, ಚಿಗರೆ ಮುಂತಾದ ಪ್ರಾಣಿಗಳ ಹಾಗೂ ಮನುಷ್ಯರ ಚಿತ್ರಗಳಿವೆ. ಮತ್ತೆ ಕೆಲವೆಡೆಗಳಲ್ಲಿಯ ಕಲ್ಲಾಸರೆಗಳಲ್ಲಿ ಕೆಮ್ಮಣ್ಣಿನಂಥ ಕೆಂಪು ಬಣ್ಣದ ಇಂಥ ಚಿತ್ರಗಳಲ್ಲದೆ ತಮ್ಮ ಧಾರ್ಮಿಕ ಕಟ್ಟಳೆಗಳಲ್ಲಿ ನಿರತರಾದ ವ್ಯಕ್ತಿಗಳ ಚಿತ್ರಗಳೂ ಇವೆ.

ಈ ವಿಶಾಲವಾದ ನೆಲೆಯ ಮೂರು ಪ್ರದೇಶಗಳಲ್ಲಿ ಕ್ರಮಬದ್ಧವಾದ ಒಟ್ಟು 8 ಗುಂಡಿಗಳನ್ನು ತೋಡಲಾಯಿತು. ಈ ಗುಂಡಿಗಳ 1 ನೆಯ ಮತ್ತು 7 ನೆಯ ಗುಂಡಿಗಳಲ್ಲಿಯ ಹಾಳು ಮಣ್ಣಿನಲ್ಲಿ ಅನುಕ್ರಮವಾಗಿ ಆಯಾ ಅಂತರಗಳಲ್ಲಿ ಅವಶೇಷಗಳ ವೈವಿಧ್ಯ, ಲಕ್ಷಣ, ಹಾಳುಮಣ್ಣಿನ ಬಣ್ಣ, ಸಾಂದ್ರತೆ ಇವುಗಳಿಗೆ ಅನುಗುಣವಾಗಿ 11 ಮತ್ತು 9 ಪದರಗಳನ್ನು ವಿಂಗಡಿಸಲಾಯಿತು. ನೆಲದ ಮಟ್ಟದಿಂದ ಕೆಳಗೆ ಮೊದಲಿನ ಐದು ಪದರಗಳಲ್ಲಿ ಇತಿಹಾಸ ಪ್ರಾರಂಭ ಕಾಲದ ಮತ್ತು ಕಬ್ಬಿಣ ಯುಗದ ಸಂಸ್ಕøತಿಗಳ ಅವಶೇಷಗಳು, ಮತ್ತು ಈ ಪದರಗಳ ಕೆಳಗಿನವುಗಳಲ್ಲಿ ನೂತನ ಶಿಲಾಸಂಸ್ಕøತಿಯ ದೊರೆತುವು. 

ಎರಡು ಮತ್ತು 3ನೆಯ ಗುಂಡಿಗಳನ್ನು ಬೃಹತ್ ಶಿಲಾಕಟ್ಟೆಗಳಲ್ಲಿ, 4ನೆಯದನ್ನು ನಿಲುಗಲ್ಲುಗಳ ಸಾಲಿನಲ್ಲಿ ತೋಡಲಾಯಿತು. ನಿಲುಗಲ್ಲುಗಳು ಶವಸಂಸ್ಕಾರಕ್ಕೆ ನೇರವಾಗಿ ಸಂಬಂಧಪಟ್ಟವಲ್ಲವೆಂದು ಗೊತ್ತಾಯಿತು. ಐದನೆಯ ಗುಂಡಿಯಲ್ಲಿ ಮಧ್ಯಯುಗೀನ ಸಂಸ್ಕøತಿಯ ಅವಶೇಷಗಳು ದೊರೆತವು.

ನೂತನ ಶಿಲಾಯುಗ ಸಂಸ್ಕøತಿಯಲ್ಲಿ ಕಂಡುಬಂದವು. ಮೊದಲಿನ ಎಂದರೆ ಪ್ರಾಚೀನ ಹಂತದಲ್ಲಿ ವಾಸಕ್ಕೋಸ್ಕರ ಸುತ್ತಲೂ ಕಲ್ಲುಗುಂಡುಗಳನ್ನಿಟ್ಟು ಸಮತಟ್ಟುಗಳನ್ನು ತಯಾರಿಸುವ ಪದ್ಧತಿಯಿತ್ತು. ಜನರು ತಮ್ಮ ದೈನಂದಿನ ಕೆಲಸಗಳಿಗೆ ಕರಿಕಲ್ಲಿನ ನಯವಾದ ಮೈಯುಳ್ಳ ಕೊಡಲಿ, ಉಳಿ ಹಾಗೂ ಚರ್ಟ್, ಕ್ಯಾಲ್ಸಿಡೋನಿ ಮುಂತಾದ, ಉತ್ತಮ ಜಾತಿಯ ಕಲ್ಲುಗಳ, ನೀಳ ಚಕ್ಕೆಗಳ ಸಣ್ಣ ಸಣ್ಣ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಸಾಮಾನ್ಯವಾಗಿ ಬೂದು ಬಣ್ಣದ ಹಾಗೂ ನಸುಗೆಂಪು ಬಣ್ಣದ ವಿವಿಧ ಆಕಾರಗಳ ಮೃತ್‍ಪಾತ್ರೆಗಳು ಬಳಕೆಯಲ್ಲಿದ್ದವು. ಇವುಗಳಲ್ಲಿ ಕೆಲವು ನೇರಳೆಯ ಬಣ್ಣದ ರೇಖಾಚಿತ್ರಗಳಿಂದ ಅಲಂಕೃತವಾಗಿದ್ದವು. ಇಲ್ಲಿಯವರು ಎತ್ತು, ಕುರಿ, ಮೇಕೆಗಳನ್ನು ಹೆಚ್ಚಾಗಿ ಸಾಕುತ್ತಿದ್ದರು. ಪ್ರಾಣಿಗಳ, ಪಕ್ಷಿಗಳ ಮತ್ತು ಮನುಷ್ಯರ ಸುಟ್ಟ ಮಣ್ಣಿನ ಬೊಂಬೆಗಳು ಬಹುಶಃ ಆಗಿನ ಕಾಲದ ಆಟಿಕೆಗಳಾಗಿದ್ದವು. ಇಲ್ಲವೇ ಧಾರ್ಮಿಕ ಕಟ್ಟಳೆಗಳಲ್ಲಿ ಅವನ್ನು ಬಳಸಲಾಗುತ್ತಿತ್ತು ಎಂದು ತಿಳಿಯಲಾಗಿದೆ. ಇಲ್ಲಿ ಮೂರು ಶವಕುಣಿಗಳು ಸಿಕ್ಕವು. ಗುಂಡಿಯನ್ನು ಅಗೆದು ಅದರಲ್ಲಿ ದೇಹವನ್ನು ಉದ್ದಕ್ಕೂ ಮಲಗಿಸಿ ಅದರ ಬದಿಯಲ್ಲಿ ಕೆಲವು ಮೃತ್‍ಪಾತ್ರೆಗಳನ್ನು, ಕಲ್ಲಿನ ಉಪಕರಣಗಳನ್ನು ಇಡುತ್ತಿದ್ದುದು ಸಾಮಾನ್ಯ. ಜೊತೆಗೆ ಸ್ವಲ್ಪ ಮಾಂಸವನ್ನು ಇಟ್ಟಿದ್ದುದರ ಗುರುತೂ ಸಿಕ್ಕಿದೆ. ಒಂದು ಗುಂಡಿಯಲ್ಲಿ ದೊರೆತ ಅಸ್ಥಿಪಂಜರ ಹೆಂಗಸಿನದೆಂದು ಕಂಡುಬಂದಿದೆ. ಅದರೊಡನೆ ಉದ್ದನೆಯ ಕೊಳವೆಯುಳ್ಳ ಒಂದು ಗಡಿಗೆಯೂ ಬಟ್ಟಲುಗಳು ಇದ್ದವು. ನೂತನ ಶಿಲಾಯುಗದ ಶವಗುಣಿಗಳಲ್ಲಿ ದೊರೆತ ಅಸ್ಥಿ ಅವಶೇಷಗಳ ಪರೀಕ್ಷಣದಿಂದ, ಆಗಿನ ಜನರು ಎತ್ತರದ ನಿಲುವುಳ್ಳವರೂ ಬಲಶಾಲಿಗಳು ಆಗಿದ್ದರೆಂದು ಹೇಳಬಹುದು. ಇವರು ಈಗಿನ ದಕ್ಷಿಣಭಾರತದಲ್ಲಿರುವ ದ್ರಾವಿಡ ಜನಾಂಗದವರ ಪೂರ್ವಜರೆಂದು ಹೇಳಲಾಗಿದೆ. ಈ ಸಂಸ್ಕøತಿಯ ಕೊನೆಯ ಹಂತದಲ್ಲಿ ಕೆಲವೊಂದು ಬದಲಾವಣೆಗಳು ತೋರಿಬಂದವು. ವಾಸದ ಗುಡಿಸಲುಗಳ ನೆಲವನ್ನು ಚೆನ್ನಾಗಿ ಬಡಿದು ಗಟ್ಟಿ ಮಾಡಿರಲಾಗುತ್ತಿತ್ತು. ಸುತ್ತಲೂ ಕಂಬಗಳನ್ನು ಹುಗಿದು, ಅವಕ್ಕೆ ಸಣ್ಣ ಸಣ್ಣ ಗಿಡ ಕಡ್ಡಿಗಳನ್ನು ಸರಿಯಾಗಿ ಹೆಣೆದು, ಮಣ್ಣು ಮೆತ್ತಿ ಗೋಡೆಗಳನ್ನು ರಚಿಸಲಾಗುತ್ತಿತ್ತು. ಗುಡಿಸಲುಗಳ ಒಳಗೆ ಅಗ್ಗಿಷ್ಟಿಕೆ, ಪಾತ್ರೆಗಳನ್ನಿಡಲು ಮೂರು ಕಲ್ಲುಗಳು ಇರುತ್ತಿದ್ದವು. ಕಲ್ಲಿನ ಆಯುಧಗಳ ಜೊತೆಗೆ ತಾಮ್ರದ ಉಪಕರಣಗಳೂ ಉಪಯೋಗದಲ್ಲಿದ್ದುವು ಎಂಬುದು ಇಲ್ಲಿ ದೊರಕಿದ ಒಂದು ತಾಮ್ರದ ಉಳಿಯಿಂದ ತಿಳಿಯುತ್ತದೆ. ಮಣ್ಣಿನ ಪಾತ್ರೆಗಳನ್ನು ಮಾಡುವ ವಿಧಾನದಲ್ಲೂ ಕೆಲವೊಂದು ಬದಲಾವಣೆಗಳಾಗಿದ್ದುದು ಕಂಡುಬರುತ್ತದೆ. ಜೊತೆಗೆ ಈ ಹಂತದ ಕೊನೆಯ ಭಾಗದಲ್ಲಿದ್ದ ಬೇರೆ ಬಗೆಯ ವರ್ಣರೇಖಾಚಿತ್ರಗಳುಳ್ಳ ಪಾತ್ರೆಗಳ ಅವಶೇಷಗಳೂ ಸಿಕ್ಕುವು. ಈ ವಿಧದ ಪಾತ್ರೆ ಹೆಚ್ಚಾಗಿ ಗೋದಾವರಿ ಪ್ರದೇಶದ ನೇವಾಸ, ಜೋರ್ವೆ, ದೈಮಾಬಾದ್ ಮುಂತಾದ ಸ್ಥಳಗಳಲ್ಲಿಯ ಶಿಲಾ-ತಾಮ್ರಯುಗ ಸಂಸ್ಕøತಿಯ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ. ಆದ್ದರಿಂದ ಈ ಕಾಲದಲ್ಲಿ ಗೋದಾವರಿ, ಕೃಷ್ಣಾ ಪ್ರದೇಶಗಳ ಜನರ ಪರಸ್ಪರ ಸಾಂಸ್ಕøತಿಕ ಸಂಬಂಧವಿತ್ತಲ್ಲದೆ, ಆ ಪ್ರದೇಶದ ಜನವರ್ಗದವರು ಅಲ್ಪಪ್ರಮಾಣದಲ್ಲಿ ಬಂದು ಈ ಪ್ರದೇಶದ ಜನರೊಡನೆ ನೆಲಸಿದ್ದರೆಂದು ಕಾಣುತ್ತದೆ. ಕಬ್ಬಿಣದ ಉಪಕರಣಗಳನ್ನು ಬಳಸುತ್ತಿದ್ದ ಜನವರ್ಗದವರು ಅನಂತರ ಬೇರೆಡೆಯಿಂದ ಬಂದು ಸ್ಥಳೀಯ ನೂತನ ಶಿಲಾಯುಗ ಸಂಸ್ಕøತಿಯವರೊಡನೆ ಬೆರೆತರೆಂದೂ ತತ್ಪರಿಣಾಮವಾಗಿ ಇಲ್ಲಿಯ ಜನರ ಜೀವನ ಕ್ರಮದಲ್ಲಿ ಕಲ್ಲಿನ ಉಪಕರಣಗಳ ಉಪಯೋಗ ತೀವ್ರವಾಗಿ ಕಡಿಮೆಯಾಗುತ್ತ ಬಂದು ಕಬ್ಬಿಣದ ಬಳಕೆ ಹೆಚ್ಚಾಗಿ ಕಬ್ಬಿಣ ಯುಗ ಪ್ರಾರಂಭವಾಯಿತೆಂದು 5 ಮತ್ತು 6 ನೆಯ ಪದರಗಳಿಂದ ದೊರೆತ ಅವಶೇಷಗಳಿಂದ ಸ್ಪಷ್ಟವಾಗಿದೆ.

ಕಬ್ಬಿಣ ಯುಗದ ಜನರ ನಿತ್ಯ ಜೀವನದ ಬಗ್ಗೆ ಹೆಚ್ಚು ತಿಳಿಯಲಾಗಿಲ್ಲ. ಆದರೆ, ಅವರು ಕಪ್ಪು-ಕೆಂಪು ಮತ್ತು ಕೆಂಪು ಬಣ್ಣದ ಮೃತ್ ಪಾತ್ರೆಗಳನ್ನೂ ಕಬ್ಬಿಣದ ಕುಡುಗೋಲು, ಕತ್ತಿ ಮೊದಲಾದ ಉಪಕರಣಗಳನ್ನೂ ಉಪಯೋಗಿಸುತ್ತಿದ್ದರು. ಹೆಚ್ಚಾಗಿ ಎತ್ತು, ಹಸುಗಳನ್ನು ಮತ್ತು ತಕ್ಕ ಮಟ್ಟಿಗೆ ಕುರಿ, ಮೇಕೆಗಳನ್ನು ಸಾಕುತ್ತಿದ್ದರು. ಈ ನೆಲೆಯಲ್ಲಿರುವ ಬೃಹತ್ ಶಿಲಾಗೋರಿಗಳನ್ನು ಕಬ್ಬಿಣಯುಗದ ಜನರೇ ನಿರ್ಮಿಸಿದರು. ಈ ಅಂಶಗಳು ಇಲ್ಲಿ ದೊರೆತ ಮಣ್ಣಿನ ಪಾತ್ರೆಗಳ ಹಾಗೂ ಪ್ರಾಣಿಗಳ ಎಲುಬುಗಳ ಅವಶೇಷಗಳಿಂದ ತಿಳಿದುಬರುತ್ತದೆ.

ಬೃಹತ್ ಶಿಲಾಗೋರಿಗಳಲ್ಲಿ ದುಂಡು ಕಟ್ಟೆಗಳಿವೆ. ಅವುಗಳಲ್ಲಿ ಮೂರು ಮಾತ್ರ ಸ್ವಲ್ಪ ಬೇರೆ ತೆರನಾಗಿವೆ. ಒಂದು ದುಂಡುಕಟ್ಟೆಯೊಳಗೆ ದೊಡ್ಡ ದೊಡ್ಡ ದುಂಡುಕಲ್ಲುಗಳಿಂದ ಕೂಡಿದ ಚೌಕೋನದ ಕೋಣೆ ಇದೆ. ಕೋಣೆ ಮತ್ತು ಕಟ್ಟೆಯ ನಡುವಿನ ಭಾಗ ಬೂದಿಕಿಟ್ಟದ ಚೂರುಗಳಿಂದ ತುಂಬಿದೆ. ಕಟ್ಟೆಯ ದಕ್ಷಿಣದ ಬದಿಗೆ ದುಂಡುಕಲ್ಲುಗಳ ಎರಡು ಸಾಲುಗಳಿಂದ ಗುರುತಿಸಲಾದ ಕೋಳಿ ಮೊಟ್ಟೆಯಾಕಾರದ ಅಂಗಳವಿದೆ. ಇದರ ಪಶ್ಚಿಮಕ್ಕಿರುವ ನಾಲ್ಕು ದುಂಡುಕಟ್ಟೆಗಳನ್ನು ಸುತ್ತುವರೆದು ಸುಮಾರಾಗಿ ಚೌಕೋನವಾದ ಕಲ್ಲಿನ ಕಟ್ಟೆಯಿದೆ. ಮತ್ತೊಂದು ಎರಡು ಸಾಲಿನ ಚೌಕನಾದ ಕಟ್ಟೆ. ಒಳಗಿನ ಕಟ್ಟೆಯೊಳಗೆ ಬೂದಿಕಿಟ್ಟದ ಚೂರುಗಳಿವೆ. 

ಕಬ್ಬಿಣಯುಗದಲ್ಲಿ ಕ್ರಮೇಣ ಕೆಲವೊಂದು ಬದಲಾವಣೆಗಳು ಕಂಡುಬಂದಿವೆ. ಕಬ್ಬಿಣದ ಬಟ್ಟಲು ತಟ್ಟೆಗಳನ್ನು ಬಿಳಿಯ ರೇಖಾಚಿತ್ರಗಳಿಂದ ಅಲಂಕರಿಸಲಾಗುತ್ತಿತ್ತು. ಒಳ್ಳೆಯ ಉತ್ತಮ ತರಗತಿಯ ಜೇಡಿ ಮಣ್ಣಿನಿಂದ ಕೂಡಿದ ಹೊಳೆಯುವ ಕೆಂಪು ಬಣ್ಣದ, ತೆಳುವಾದ ಉದ್ದನೆಯ ಮೂತಿಯ ಹೂಜಗಳನ್ನು ತಯಾರಿಸಲಾಗುತ್ತಿತ್ತು. ದನ, ಎತ್ತು, ಕುರಿ, ಮೇಕೆಗಳ ಜೊತೆಗೆ ಎಮ್ಮೆಗಳನ್ನು ಸಾಕುವುದು ಬಳಕೆಯಲ್ಲಿತ್ತು. ಈ ಹಂತವನ್ನು ಇತಿಹಾಸ ಪ್ರಾರಂಭ ಕಾಲದ ಸಂಸ್ಕøತಿ ಎಂದು ಹೆಸರಿಸಲಾಗಿದೆ. ಈ ಕಾಲದ ಅನಂತರ ಮಧ್ಯಯುಗೀನ ಕಾಲದ ಅವಶೇಷಗಳು ಅವಶ್ಯವಿದ್ದಷ್ಟು ಪರಿಮಾಣದಲ್ಲಿ ಈ ಉತ್ಖನನಗಳಲ್ಲಿ ದೊರೆಯಲಿಲ್ಲ. 

ಕೊನೆಯ ಹಂತದ ಮಧ್ಯಯುಗೀನ ಕಾಲದ ಮೃತ್ ಪಾತ್ರೆಗಳ ಆಕಾರದಲ್ಲಿ ರಚನೆಯಲ್ಲಿ ಸ್ಪಷ್ಟ ಬದಲಾವಣೆಗಳಾಗಿದ್ದುವು. ಆದರೆ, ನಿತ್ಯ ಜೀವನದ ಉಳಿದ ಅಂಶಗಳಲ್ಲಿ ಆದ ಬದಲಾವಣೆಗಳು ಸ್ಪಷ್ಟವಾಗಿಲ್ಲ. ಗಾಜಿನ ಬಳೆ ಮುಂತಾದ ಬಳಕೆ ಇತ್ತು.	
	(ಎ.ಎಸ್.ಯು.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ